ಸರಕಾರಿ ಇಲಾಖೆಯೊಂದರಿಂದ ಸೇವೆ ಪಡೆಯುದು ಎಂದರೆ ಅದು ಸವಾಲಿನ ಕೆಲಸ ಎಂದೇ ಮೊದಲಿನ ಯೋಚನೆ. ಗ್ರಾಮಕಚೇರಿಯಿಂದ ಈ ಹಿಂದೆ ಲಭಿಸಿದ ಪ್ರಮಾಣಪತ್ರವೊಂದನ್ನು ನವೀಕರಣ ಮಾಡುವುದರಿಂದ ಹಿಡಿದು ಕೋರ್ಟ್ ವ್ಯವಹಾರಗಳ ತನಕ ಜನಸಾಮಾನ್ಯರು ಓಡಾಡುವ ಪರಿಯು ಹೇಳತೀರದು. ಸಂಪೂರ್ಣ ಡಿಜಿಟಲೀಕರಣಗೊಂಡ ಬಹುತೇಕ ಸರ್ಕಾರಿ ಇಲಾಖೆಗಳಿಂದ ಯಥಾಸಮಯಕ್ಕೆ ಸೇವೆಯು ಸಿಗಬೇಕಾದರೆ ನಿಗದಿತ ಸೇವಾ ಶುಲ್ಕವನ್ನು ಪಾವತಿಸಿ, ಆನ್‌ಲೈನ್ ಮೂಲಕ ವಿಸ್ತೃತ ಅರ್ಜಿ ಹಾಕಿದರೂ ಸಾಕಾಗುವುದಿಲ್ಲ. ಆಯಾ ಕಚೇರಿಗೆ ಹೋಗಿ ದಾಖಲಾತಿಗಳನ್ನು ಅಧಿಕಾರಿಗಳ ಎದುರು ಭೌತಿಕವಾಗಿ ತೋರಿಸಬೇಕಾದ ಅನಿವಾರ್ಯತೆ ಇಂದಿಗೂ ಇದೆ. ಆದರೆ ಇತ್ತೀಚೆಗೆ ನನಗೆ ಇದೊಂದು ಸರ್ಕಾರಿ ಇಲಾಖೆಯೊಂದಿಗಿನ ವ್ಯವಹಾರ ತುಂಬಾ ಖುಷಿಯನ್ನು ನೀಡಿತು. ಇದು ಕೇಂದ್ರ ಆದಾಯ ತೆರಿಗೆ ಇಲಾಖೆ. ಪ್ರತಿ ಆರ್ಥಿಕ ವರ್ಷದ ಅಂತ್ಯದಲ್ಲಿ ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸುವುದು ನಾಗರಿಕರ ಸಾಮಾಜಿಕ ಹೊಣೆ. ಆದಾಯ ತೆರಿಗೆ ಮಿತಿಯ ಮೇಲಿನ ಆದಾಯದವರಿಗೆ ಇದು ಕಡ್ಡಾಯವಾಗಿದೆ. ಅದೇ ರೀತಿ ನಮ್ಮ ಆದಾಯ ಕಡಿಮೆ ಆಗಿದ್ದರೂ ಕೆಲವು ಆರ್ಥಿಕ ವ್ಯವಹಾರಗಳಲ್ಲಿ ನಮಗೆ ಲಭಿಸಬೇಕಾದ ಹಣದಲ್ಲಿ ಟಿ.ಡಿ.ಎಸ್ (ವ್ಯವಹಾರದ ಮೂಲದಲ್ಲಿ ಆದಾಯ ತೆರಿಗೆ ಇಲಾಖೆ ಸಂಗ್ರಹಿಸಿದ ಮುಂಗಡ ಹಣ) ಕಡಿತವಾಗಿರುತ್ತದೆ. ಈ ಟಿ.ಡಿ.ಎಸ್ ನಮ್ಮ ಪರವಾಗಿ ಆದಾಯ ತೆರಿಗೆ ಇಲಾಖೆಗೆ ಪಾವತಿಯಾಗಿರುತ್ತದೆ. ಆರ್ಥಿಕ ವರ್ಷದ ಕೊನೆಯಲ್ಲಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಮೂಲಕ ಆ ಹಣವನ್ನು ನಮಗೆ ಮರಳಿ ಪಡೆಯಬಹುದು.
ನಾನು ನನ್ನ ಸಣ್ಣದೊಂದು ಆರ್ಥಿಕ ವ್ಯವಹಾರದಲ್ಲಿ ಕಡಿತವಾಗಿದ್ದ ಟಿ.ಡಿ.ಎಸ್ ಮೊತ್ತ ಮರಳಿ ಪಡೆಯುವ ಸಲುವಾಗಿ ಐ.ಟಿ. ರಿಟರ್ನ್ ಸಲ್ಲಿಸಬೇಕಿತ್ತು. ಮರಳಿ ಸಿಗಬೇಕಾದ ಹಣ ತೀರಾ ಸಣ್ಣಮೊತ್ತ ಆಗಿರುವ ಕಾರಣದಿಂದ ಸಾವಿರಾರು ರೂಪಾಯಿ ಖರ್ಚು ಮಾಡಿ ಪರಿಣಿತ ಲೆಕ್ಕಿಗರ ಮೂಲಕ ರಿಟರ್ನ್ ಸಲ್ಲಿಸುವುದು ನಷ್ಟ ಆಗಬಹುದು ಅನಿಸಿತು. ನಾನೇ ಸ್ವತಃ ನನಗೆ ಸಂಬಂಧಿಸಿದ ಐ.ಟಿ.ಆರ್ 4 ಸಲ್ಲಿಸಲು ಹೊರಟೆ. ನನಗೆ ವಾಣಿಜ್ಯ ವಿಷಯಗಳ ಪರಿಚಯ ಇಲ್ಲದಿದ್ದರೂ ಸಂಜೆ 07.00 ಗಂಟೆಗೆ ಶುರು ಮಾಡಿದ ಕೆಲಸ ಮೂವತ್ತು ನಿಮಿಷದಲ್ಲಿ ಸರಳವಾಗಿ ಗೂಗಲ್ ಸಹಾಯದೊಂದಿಗೆ ಪೂರ್ತಿಗೊಳಿಸಿದೆ. ಮರುಪಾವತಿ ಅನುಮೋದಿಸಲಾಗಿದೆ ಎಂದು ರಾತ್ರಿ ಸುಮಾರು 11.53 ಕ್ಕೆ ಇಲಾಖೆಯಿಂದ ಮೆಸೇಜ್ ಬಂತು. ಅದೇ ವೇಳೆಗೆ ನನ್ನ ಫೈಲ್‌ಗೆ ಅಧಿಕಾರಿಯ ಡಿಜಿಟಲ್ ಸಹಿ ಕೂಡ ಹಾಕಲಾಗಿತ್ತು. ಮರುದಿನ ಬೆಳಿಗ್ಗೆ ಸುಮಾರು 09.30 ಕ್ಕೆ ನನ್ನ ಖಾತೆಗೆ ಹಣ ಮರುಪಾವತಿ ಆಗಿತ್ತು. ಅದೂ ಕೂಡ ನನಗೆ ಪಾವತಿಯಾಗಬೇಕಿದ್ದ ಟಿ.ಡಿ.ಎಸ್ ಜೊತೆ ಬ್ಯಾಂಕ್ ಬಡ್ಡಿಯನ್ನೂ ಸೇರಿಸಿ ಪಾವತಿಸಿದ್ದರು. ಅಂದರೆ ಕೇವಲ 14 ಗಂಟೆಯೊಳಗೆ ನನ್ನ ಐ.ಟಿ.ಆರ್ ರೀಫಂಡ್ ನನಗೆ ಲಭಿಸಿತು. ಅದು ಕೂಡ ಸಂಪೂರ್ಣ ಆನ್‌ಲೈನ್ ಹಾಗೂ ಉಚಿತವಾಗಿ. ಬಹುಶಃ ನನಗೆ ಯಾವುದೇ ಸರಕಾರಿ ಸೇವೆಯು ಇಷ್ಟೊಂದು ತ್ವರಿತವಾಗಿ ಮತ್ತು ಸರಳವಾಗಿ ಸಿಕ್ಕಿಲ್ಲ. ಕೇಂದ್ರ ಆದಾಯ ತೆರಿಗೆ ಇಲಾಖೆಯ ನೀತಿ, ಅಧಿಕಾರಗಳ ಜವಾಬ್ದಾರಿ ಪ್ರಜ್ಞೆ, ನಾಗರಿಕ ಸ್ನೇಹಿ ಪ್ರಕ್ರಿಯೆ ನನ್ನ ಮನವನ್ನು ಮೆಚ್ಚಿಸಿತು. ಇತರೆ ಸರಕಾರಿ ಇಲಾಖೆಗಳಿಗೂ ಈ ಇಲಾಖೆ ಮಾದರಿಯಾಗಬೇಕು ಎನ್ನವುದು ನನ್ನ ಆಸೆ. ನನ್ನ ವ್ಯವಹಾರ ತೀರಾ ಸಣ್ಣ ಮಟ್ಟದ್ದು ಆದ ಕಾರಣ ಮತ್ತಷ್ಟೂ ವೇಗದಲ್ಲಿ ಈ ಪ್ರಕ್ರಿಯೆ ಮುಕ್ತಾಯವಾಗಿರಬಹುದು. ಆದರೆ ಒಂದು ದಶಕದ ಹಿಂದೆ ಐ.ಟಿ.ಆರ್ ರೀಫಂಡ್ ಅನುಮೋದನೆಗೆ ಸರಾಸರಿ 90 ದಿನಗಳು ಅಗತ್ಯವಾಗಿತ್ತು. ಆದರೆ ಇದೀಗ ಅದು 15 ರಿಂದ 20 ದಿನಗಳಿಗೆ ಇಳಿದಿದೆ. ಸರಳ ರಿಟರ್ನ್‌ಗಳು ಬೆರಳೆಣಿಕೆಯ ದಿನಗಳೊಳಗೆ ಅನುಮೋದನೆಗೊಳ್ಳುತ್ತದೆ. ನಾನೊಬ್ಬ ಆದಾಯ ತೆರಿಗೆ ಪಾವತಿದಾರನಲ್ಲದಿದ್ದರೂ ಆದಾಯ ತೆರಿಗೆದಾರರಿಗೆ ಭಾರತ ಸರಕಾರ ಒದಗಿಸುವ ಸಕಾರಾತ್ಮಕ ವಾತಾವರಣಕ್ಕೆ ನನ್ನದೊಂದು ಪುಟ್ಟ ಅಭಿನಂದನೆ. ಇದು ಸರಕಾರಿ ಸೇವೆಗಳ ತ್ವರಿತಗತಿಯೆಡೆಗೆ ಹೊಸಬೆಳಕಾಗಲಿ.


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ